ಪೂಜ್ಯ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ನಮ್ಮ ನಾಡಿನ ಶ್ರೇಷ್ಠ ಅನುಭಾವಿಗಳು, ಸಮಾಜ ಚಿಂತಕರು, ಪ್ರತಿಭಾವಂತ / ಸಾಹಿತಿಗಳು, ಉತ್ಕೃಷ್ಟ ಸಾಹಿತ್ಯ ಪ್ರೇಮಿಗಳು, ಸಾಹಿತಿ-ಸಂಶೋಧಕರನ್ನು ಪ್ರೀತಿಸುವ ವಿಶಾಲ ಹೃದಯ ಸಿರಿವಂತರು. ಸಾಹಿತ್ಯ ಸಂಗ್ರಹಿಸುವ ಗುಣಗ್ರಾಹಿಗಳು. ಎಲ್ಲಕ್ಕೂ ಮಿಗಿಲಾಗಿ ನಮ್ಮ ಧರ್ಮ-ಸಂಸ್ಕೃತಿಗಳನ್ನು ಪುನರುಜ್ಜಿವನಗೊಳಿಸಿದ ಮಹಾತ್ಮರು. ಅವರ ಸಾಮಾಜಿಕ ಕಳಕಳಿ, ಧಾರ್ಮಿಕ ಕಾಳಜಿ ಅನನ್ಯವಾದುದು. ಅವರು ನಮ್ಮ ಸಮಾಜಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾದುದು. ವ್ಯಕ್ತಿಯಲ್ಲಿ ಘನತೆ, ಸಮಾಜದಲ್ಲಿ ಸಮತೆ, ರಾಷ್ಟ್ರದಲ್ಲಿ ಭಾವೈಕ್ಯತೆಯನ್ನು ಸಾಧಿಸಿದ ಸಿದ್ದಿ ಪುರುಷರು ಪೂಜ್ಯ ಶ್ರೀಗಳು.
ನಮ್ಮ ಲಿಂಗಾಯತ(ವೀರಶೈವ) ಸಮಾಜವು ೧೯ನೇ ಶತಮಾನದ ಆದಿ ಭಾಗದಲ್ಲಿ ಮಹಾಂಧಕಾರದಲ್ಲಿ ಮುಳುಗಿತ್ತು. ಮಹಾರೋಗಕ್ಕೆ ತುತ್ತಾಗಿತ್ತು. ಎಲ್ಲೆಡೆ ಅನ್ಯಾಯ ಅನಾಚಾರಗಳು ತಾಂಡವಾಡುತ್ತಿದ್ದವು. ಮೈದೆಗೆದು ಬೆಳೆದು ನಿಂತಿದ್ದವು. ಗುರುಗಳು ತಮ್ಮ ಗೊತ್ತು ಗುರಿ ಮರೆತು ಸ್ವಾರ್ಥದ ಕೋಟೆ ಕಟ್ಟಿಕೊಂಡಿದ್ದರು. ಲಿಂಗಾಯತರು ಎಂದು ಹೇಳಿಕೊಳ್ಳುವವರ ಅಂಗದ ಮೇಲಿನ ಲಿಂಗ ಮಾಯವಾಗಿತ್ತು,ಭಾವಿಗಳಾಗಿ ತಿರುಗುವ ಸ್ಥಿತಿಯಿತ್ತು. ಪಂಚಸೂತ್ರದ ಮಾತು ಸೂತಕವಾಯಿತು ಭಸ್ಮವಂತೂ ಭಸ್ಮವೇ ಆಗಿತ್ತು. ಪಾದೋದಕ -ಪ್ರಸಾದ ಇನ್ನೆಲ್ಲಿಯದು. ಮಂತ್ರದ ಮಹಿಮೆ ಮಾಯವಾಗಿತ್ತು. ಪಂಚಾಚಾರಗಳ ಪ್ರಾಣ -ತ್ರಾಣ ಸುಳಿವಿರಲಿಲ್ಲ. ಎತ್ತನೋಡಿದಡತ್ತ ಸ್ವಾರ್ಥದ ಕಲಾಪ ,ಅರ್ಥಿಗಳ - ಅನರ್ಥಿಗಳ ಮೇಳಾಪ. ಷಟಸ್ಥಲ ತತ್ವ ತಿಳಿದವರು ಅಪರೂಪ. ಇಂಥ ಸಂದಿಗ್ದ ಸ್ಥಿತಿಯಲ್ಲಿ ವೈದ್ಯಭಾನುವಿನ ಉದಯವಾಯಿತು. ಆಚಾರದ ಬೆಳೆ ಸುಳಿದೆಗೆದು ಬೆಳೆದು ಕುಸುಮವಾಗಿ ಸರ್ವತ್ರ ಸುವಾಸಿಸಿತು. ಜಗುಲಿಯ ಮೇಲಿನ ಲಿಂಗಗಳೆಲ್ಲ ಅಂಗದ ಮೇಲೆ ನಿಂದು ಕಂಗೊಳಿಸಿದವು, ವಿಭೂತಿ-ರುದ್ರಾಕ್ಷಿಗಳು ವಿರಾಜಿಸಿದವು. ಜಂಗಮರು ತತ್ವಭರಿತರಾದರು. ನಾಡ ಸಂಚರಿಸಿದರು. ಹೀಗೆ ಹಲವು ಬಗೆಯಲ್ಲಿ ನಮ್ಮ ಸಮಾಜ ಸರ್ವಾಂಗ ಸುಂದರವಾಗಲು ಶ್ರಮಿಸಿದ ಸಮತಾಭಾವಿಗಳೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು.
ಅವರು ಮಾಡದ ಸಮಾಜ ಸೇವೆ ಮತ್ತೊಂದಿಲ್ಲ. ನಮ್ಮ ಧರ್ಮದ ಸರ್ವಶ್ರೇಷ್ಠ ಸಾಹಿತ್ಯ ವಚನ ಸಾಹಿತ್ಯವನ್ನು ೧೫ನೇ ಶತಮಾನದಲ್ಲಿ ನಿರಂಜನ ಜಂಗಮ ತೋಂಟದ ಸಿದ್ದಲಿಂಗ ಶಿವಯೋಗಿಗಳು ಮತ್ತು ಅವರ ಶಿಷ್ಯ-ಪ್ರಶಿಷ್ಯರು ಸಂಗ್ರಹ-ಸಂಸ್ಕರಣ-ಸಂಪಾದನೆ ಮಾಡಿ, ಅದು ಸಾರ್ವಕಾಲಿಕ ಸತ್ಯಸಾರುವ ಮಹಾಮೌಲ್ಯದ ಪ್ರತೀಕವಾಗುವಂತೆ ರೂಪಿಸಿದರು. ಆದರೆ ನೆಲದ ಗುಣವೋ, ಕಾಲದ ಗುಣವೋ ಏನೋ ಮತ್ತೆ ೪೦೦ ವರ್ಷಗಳ ಕಾಲ ವಚನ ಸಾಹಿತ್ಯ ಗುಪ್ತನಿಧಿಯಾಗಿತ್ತು. ಈ ಪವಿತ್ರ ವಚನಗಂಗೋತ್ರಿ ಮತ್ತೆ ನಾಡಿನೆಲ್ಲೆಡೆ ಹರಿಯುವಂತೆ ಮಾಡಿದ ಸಾಹಿತ್ಯ ಭಗಿರಥರು ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು.
ನಾಡ ಸಂಚರಿಸಿ, ಶ್ರೀಮಂತರ ಕಣ್ಣು ತೆರೆಸಿ ಸಂಸ್ಕೃತಿ ಬೆಳೆಸಲು ಪ್ರೇರಣೆಯಿತ್ತ ಪ್ರೇರಕರು. ಸಿರಸಂಗಿ ಲಿಂಗರಾಜರು ಪೂಜ್ಯರ ಪ್ರೇರಣೆ ಮೇರೆಗೆ ತಮ್ಮ ಸಮಸ್ತ ಸಂಸ್ಥಾನವನ್ನು ಲಿಂಗಾಯತ ಸಮಾಜಕ್ಕೆ ಧಾರೆಎರೆದು ಚಿರಕಾಲ ಧನ್ಯತೆ ಪಡೆದರು. ಒಡೆದು ಹೋಳಾಗಿದ್ದ ಸಮಾಜವನ್ನು ಒಗ್ಗೂಡಿಸಲೆಂದೇ ಪೂಜ್ಯರು 'ಅಖಿಲ ಭಾರತ ವೀರಶೈವ ಮಹಾಸಭೆ ' ಯನ್ನು ಸ್ಥಾಪಿಸಿ, ಅದನ್ನು ಸಂಘ ಶಕ್ತಿಯಾಗಿ ಬೆಳೆಸಿ -ಹರಸಿ - ಹಾರೈಸಿದ ಸಮಾಜ ಪ್ರೇಮಿಗಳು. ಸ್ವಾರ್ಥದ ಕೋಟೆ ಕಟ್ಟಿಕೊಂಡು ಗಾಢ ನಿದ್ರೆಯಲ್ಲಿದ್ದ ಸಮಾಜ ಭಾಂಧವರನ್ನು ಬಡಿದೆಬ್ಬಿಸಿದ ಮಹಾಮಹಿಮರು.
ಮಹಿಳೆಯರ ಸುಧಾರಣೆಯ ಬಗೆಗೂ ಶ್ರೀಗಳಿಗೆ ಬಹಳ ಕಳಕಳಿ ಇತ್ತು. ತಮ್ಮ ಅಂತಃಚಕ್ಷುಗಳಿಂದ ವೀಕ್ಷಿಸಿ ಮಹಿಳೆಯರ ಸರ್ವಾ೦ಗಿನ ಅಭಿವೃದ್ಧಿಗೆ ಶ್ರಮಿಸಿದರು ಪ್ರತಿ ವರ್ಷ ಶಿವಯೋಗಮಂದಿರ ಜಾತ್ರಾ ಸಮಯದಲ್ಲಿ 'ಮಹಿಳಾ ಗೋಷ್ಠಿ' ಏರ್ಪಡಿಸುತ್ತಿದ್ದರು. ಸಭೆಯ ನಿರ್ವಹಣೆ ಹಿಡಿದು ಎಲ್ಲ ವ್ಯವಸ್ಥೆಯನ್ನು ಮಹಿಳೆಯರೇ ಮಾಡುವಂತೆ ಉತ್ತೇಜನ ನೀಡುತಿದ್ದರು. ಸುಧಾರಣೆಯ ಬಗೆಗೆ ಉತ್ತಮ ಪ್ರಶ್ನೆಗಳನ್ನು ತಾವೇ ಕಳುಹಿಸಿ ಚರ್ಚಿಸಲು ಪ್ರೋತ್ಸಾಹ ನೀಡುತ್ತಿದ್ದರು. 'ಮಹಿಳೆ ಮನುಕುಲದ ಜೀವಕಳೆ' ಎಂಬ ಅಭಯವಾಕ್ಯ ನುಡಿದ ಪೂಜ್ಯರು ಮಹಿಳಾ ಸಂಕುಲಕ್ಕೆ ಮೂರ್ತಸ್ವರೂಪ ಕೊಟ್ಟವರು.
ಗುರು-ವಿರಕ್ತರಲ್ಲಿ ಸಮರತಿ, ಸಮಕ್ರಿಯೆ, ಸಮಭಾವ ಮೂಡಿಸುವುದರಲ್ಲಿ ಪೂಜ್ಯರು ವಹಿಸಿದ ಪಾತ್ರ ಅನ್ಯಾದೃಶ್ಯವಾದುದು. ವಾಣಿಜ್ಯ-ವ್ಯವಸಾಯ, ಸ್ವಯಂ ಸೇವಾ ಶಿಕ್ಷಣ ಎಲ್ಲವನ್ನು ಸಮಾಜಕ್ಕೆ ನೀಡಿದ ಸಮತಾಭಾವಿಗಳು. ಸಮಾಜ ಸಂಸ್ಕರಣ ಮಾಡಿ ಸಂಸ್ಕೃತಿ ರಕ್ಷಿಸಿದರು. ಅಂಧಮಕ್ಕಳ ಬಾಳಿಗೂ ಬೆಳಕು ನೀಡಿದ ಪೂಜ್ಯರು ಪಂಚಾಕ್ಷರ ಗವಾಯಿಗಳಿಗೆ ಸಂಗೀತ ಶಿಕ್ಷಣ ನೀಡಿ ಸಮಸ್ತ ಅಂಧಮಕ್ಕಳಿಗೆ ಈ ವಿದ್ಯಾದಾನ ನಿರಂತರ ಸಾಗಲೆಂದು ಹರಸಿದರು.