NAGANURU SRI RUDRAKSHIMATH

Rudrakshimath Image

A SAGA

ನಾಗನೂರು' ಇಂದಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ಚಿಕ್ಕ ಗ್ರಾಮ. ಜನಸಂಖ್ಯೆ ಸರಿ ಸುಮಾರು 5 ಸಾವಿರ ಇರಬಹುದು. ಕೃಷಿಕರೇ ಬಹುಸಂಖ್ಯಾತರಾಗಿರುವ ಈ ಗ್ರಾಮದ ಪ್ರಮುಖ ಮಠವೇ ರುದ್ರಾಕ್ಷಿಮಠ, ಅಂದಾಜು ಎರಡುನೂರು ವರ್ಷಗಳ ಇತಿಹಾಸವಿರುವ ಈ ಮಠಕ್ಕೆ ಇಂದಿನ ಪೀಠಾಧಿಪತಿಗಳು ಹತ್ತನೆಯವರು. ಸಿದ್ಧಪುರುಷ ಗರಗದ ಮಡಿವಾಳ ಶಿವಯೋಗಿಗಳ ಒಡನಾಡಿನಗಳಾಗಿದ್ದ ಪೂಜ್ಯರಾದ ಅಲ್ಲಮಪ್ರಭು ಸ್ವಾಮಿಗಳು ಹಾಗು ಸಿದ್ದರಾಮ ಸ್ವಾಮಿಗಳು ಕ್ರಿ.ಶ. 1820ರ ಸಮಯಕ್ಕೆ ಈ ಮಠವನ್ನು ಸ್ಥಾಪಿಸಿದ್ದಾರೆ. ಇವರು ಮೂಲತಃ ವಿಜಾಪುರದ ತೊರವಿ ಭಾಗದವರೆಂದೂ, ಕಿತ್ತೂರಿನಲ್ಲಿ ಗರಗದ ಶ್ರೀ ಮಡಿವಾಳ ಶಿವಯೋಗಿಗಳ ಆಣತಿಯ ಮೇರೆಗೆ ಹಲವು ಕಾಲ ನೆಲೆಸಿ, ದೊರೆ ಶಿವಲಿಂಗರುದ್ರ ಸರ್ಜನಿಗೂ ಮಡಿವಾಳ ಶಿವಯೋಗಿಗಳಿಗೂ ಭಿನ್ನಾಭಿಪ್ರಾಯ ಬಂದ ಕಾರಣಕ್ಕಾಗಿ ಕಿತ್ತೂರನ್ನು ತೊರೆದು ನಾಗನೂರಿಗೆ ಬಂದರೆಂದೂ ಜನಾಭಿಪ್ರಾಯ ಜನಜನಿತವಾಗಿದೆ. ನಾಗನೂರಿನ ಹೊರವಲಯದ ಚೌಕಿಮಠದಲ್ಲಿ ಈ ಇಬ್ಬರೂ ಶ್ರೀಗಳ ಸಮಾಧಿಗಳು ಇವೆ. ಎಲ್ಲ ಮಠಗಳ ಸಂಸ್ಥಾಪಕರು ಒಬ್ಬರೇ ಆಗಿರುವುದು ಸಾಮಾನ್ಯ. ಆದರೆ ನಾಗನೂರು ರುದ್ರಾಕ್ಷಿಮಠದ ಸಂಸ್ಥಾಪಕರು ಇಬ್ಬರಾಗಿರುವುದು ವಿಶೇಷ.

Rudrakshimath Image

...

ಶ್ರೀಮಠದ ಏಳನೆಯ ಪೀಠಾಧಿಪತಿಗಳಾದ ಡಾ. ಶಿವಬಸವ ಮಹಾಸ್ವಾಮಿಗಳ ಕಾಲಾವಧಿಯನ್ನು ನಾಗನೂರು ರುದ್ರಾಕ್ಷಿಮಠದ 'ಸುವರ್ಣಯುಗ' ಎಂದೇ ಭಾವಿಸಲಾಗಿದೆ. ಪೂಜ್ಯಶ್ರೀಗಳು ಬಡತನದಲ್ಲಿಯೇ ಹುಟ್ಟಿ, ಬಡತನದಲ್ಲಿಯೇ ಬೆಳೆದವರು. ಬಾಲ್ಯಾವಸ್ಥೆಯಲ್ಲಿಯೇ ತಾಯಿ ರುದ್ರಮ್ಮ ಹಾಗು ತಂದೆ ಅಡವಯ್ಯನವರನ್ನು ಕಳೆದುಕೊಂಡು ಸಮಾಜದ ಮಗುವಾಗಿ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾದರು. ಕಿರಿಯ ವಯಸ್ಸಿನಲ್ಲಿಯೇ ನಾಗನೂರು ಮಠದ ಉತ್ತರಾಧಿಕಾರಿಯಾಗಿ, ಸ್ವಾಮಿಗಳ ಧಾರ್ಮಿಕ ತರಬೇತಿ ಕೇಂದ್ರ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದು. ಲಿಂ. ಹಾನಗಲ್ಲ ಗುರು ಕುಮಾರ ಶಿವಯೋಗಿಗಳವರ ಶಿಷ್ಯತ್ವ ಸ್ವೀಕರಿಸಿದವರು. ಗುರುಗಳ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡಿದ ಅವರು ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡರು. ಅವರ ಆಶೀರ್ವಾದವನ್ನು ಪಡೆದು ಕ್ರಿ.ಶ. 1928ರಲ್ಲಿ ನಾಗನೂರು ರುದ್ರಾಕ್ಷಿಮಠದ ಕಾರ್ಯಭಾರ ವಹಿಸಿಕೊಂಡು ಭಕ್ತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡರು. ಬಡತನ, ದಾರಿದ್ರ ಹಾಗು ಅನಕ್ಷರತೆಯಿಂದ ಸಮಾಜ ಹೀನ ಸ್ಥಿತಿಯಲ್ಲಿರುವುದನ್ನು ಕಂಡು ಅವರ ಕರುಳು ಚುರೆಂದಿತು. ಹಾನಗಲ್ಲ ಕುಮಾರ ಶಿವಯೋಗಿಗಳವರಿಂದ ಸಮಾಜ ಸೇವಾ ದೀಕ್ಷಾ ಬದ್ಧರಾಗಿದ್ದ ಅವರು 1932ರಲ್ಲಿ ಬೆಳಗಾವಿ ಮಹಾನಗರಕ್ಕೆ ಬಂದು ಗ್ರಾಮೀಣ ಬಡಮಕ್ಕಳಿಗೆ ಪ್ರಸಾದ ನಿಲಯ ಪ್ರಾರಂಭಿಸಿದರು. ಜಾತಿ, ಮತ, ಪಂಥಗಳ ಭೇದವಿಲ್ಲದೇ ಬಡವರೆಲ್ಲರಿಗೂ ಪ್ರಸಾದ ನಿಲಯದಲ್ಲಿ ಪ್ರವೇಶವಾವಕಾಶ ನೀಡಿ ಅನ್ನ- ಆಶ್ರಯಗಳನ್ನೊದಗಿಸಿದರು. ಇಲ್ಲಿಂದಲೇ ಅವರ ಸಮಾಜ ಸೇವೆಯ ಬೀಜಾಂಕುರವಾಯಿತು. ಪರಮಪೂಜ್ಯರಾದ ಡಾ. ಶಿವಬಸವ ಮಹಾಸ್ವಾಮಿಗಳವರದು ಈ ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ಇದೆ. ಅವರು ಪ್ರಸಾದ ನಿಲಯದಲ್ಲಿ ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಸ್ವಾತಂತ್ರ್ಯಯೋಧರಿಗೂ ಅನ್ನ ಆಶ್ರಯಗಳನ್ನಿತ್ತು ಪ್ರೋತ್ಸಾಹಿಸಿದರು. ಕರ್ನಾಟಕ ಏಕೀಕರಣಕ್ಕಾಗಿಯೂ ಬಹುವಾಗಿ ಶ್ರಮಿಸಿದರು. ಅದಕ್ಕಾಗಿ ಮರಾಠಿ ಭಾಷಿಕರ ಕೆಂಗಣ್ಣಿಗೂ ಗುರಿಯಾದರು. ಕಾಲಾಂತರದಲ್ಲಿ ಪ್ರಸಾದ ನಿಲಯಕ್ಕೆ ಆದಾಯದ ಮೂಲಗಳನ್ನು ಸ್ಥಾಪಿಸಿ ಕಾಯಕಲ್ಪ ಒದಗಿಸಿದರು. ಜ್ಞಾನದಾಸೋಹಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. 1954ರ ನಂತರ ಅವರ ಉತ್ತರಾಧಿಕಾರಿಗಳಾಗಿದ್ದ ಪೂಜ್ಯಶ್ರೀ ಪ್ರಭುಸ್ವಾಮಿಗಳವರೂ ಪೂಜ್ಯರ ಸೇವಾಕಾರ್ಯಗಳಲ್ಲಿ ಕೈಗೂಡಿಸಿ. ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಜ್ಞಾನಶಕ್ತಿಗೆ ಕ್ರಿಯಾಶಕ್ತಿಯ ಜೋಡಣೆ ಒಂದು ಅಪೂರ್ವ ಸಂಗಮವೆನಿಸಿತು. ಪರಿಣಾಮ ನಾಗನೂರು ರುದ್ರಾಕ್ಷಿಮಠ ನಾಡಿನ ಹೆಮ್ಮೆಯ ಮಠಗಳಲ್ಲಿ ಒಂದಾಯಿತು. ಪೂಜ್ಯ ಪ್ರಭುಸ್ವಾಮಿಗಳವರು 1987ರಲ್ಲಿ ಅಕಾಲಿಕ ಲಿಂಗೈಕ್ಯರಾದುದು ಪೂಜ್ಯಶ್ರೀಗಳವರಿಗೆ ಬರಸಿಡಿಲೆರಗಿದಂತಾಯಿತು. ಆ ಸಂದರ್ಭದಲ್ಲಿ ಶ್ರೀಗಳವರು ಇಳಿವಯಸ್ಸಿನಲ್ಲಿ ಅನುಭವಿಸಿದ ನೋವು. ಯಾತನೆ ಅನನ್ಯ. ಆದರೂ ಸ್ಥಿತಪ್ರಜ್ಞರಾಗಿ ಎಲ್ಲವನ್ನೂ ಸಹಿಸಿಕೊಂಡು ಹಾನಗಲ್ಲ ಶ್ರೀಗಳವರ ಆದೇಶದ ಸೇವಾಕಾರ್ಯವನ್ನು ಮುಂದುವರೆಸಿದರು.

"ಭಕ್ತಿ ಎಂತಹದಯ್ಯ ? ದಾಸಯ್ಯ ಮಾಡಿದಂತಹದಯ್ಯ. ಭಕ್ತಿ ಎಂತಹದಯ್ಯ ? ಸಿರಿಯಾಳ ಮಾಡಿದಂತಹದಯ್ಯ, ಭಕ್ತಿ ಎಂತಹದಯ್ಯ ? ನಮ್ಮ ಬಲ್ಲಾಳ ಮಾಡಿದಂತಹದಯ್ಯ, ಭಕ್ತಿ ಎಂತಹದಯ್ಯ ? ಕೂಡಲಸಂಗಮದೇವ , ನೀ ಬಾಣನ ಬಾಗಿಲ ಕಾಣ ದಂತಹದಯ್ಯ !."

ಪರಮಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳವರ ಅನನ್ಯ ಸೇವೆಯನ್ನು ಗಮನಿಸಿ ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯಿಂದ ಸನ್ಮಾನಿಸಿತು. ಅವರ ಸೇವಾ ಕಾರ್ಯಗಳ ಫಲವಾಗಿ ನಂತರ ದಿನಗಳಲ್ಲಿ ನಾಗನೂರು ರುದ್ರಾಕ್ಷಿಮಠಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತು. ನಾಡು-ನುಡಿಯ ಸೇವೆಯನ್ನು ಸರ್ವಾರ್ಪಣ ಭಾವದಿಂದ ಮಾಡುವ ಮೂಲಕ ಈ ನಾಡಿನ ಪುಣ್ಯಪುರುಷರಲ್ಲಿ ಶ್ರೀಗಳು ಅಗ್ರಗಣ್ಯರೆನಿಸಿದರು. ಗುರುಗಳಂತೆ ಅವರೂ ಸದಾ ಸಮಾಜದ ಹಿತಚಿಂತನೆಯಲ್ಲಿಯೇ ದಿನಗಳೆದು ತಮ್ಮ ಬದುಕಿನ 105ನೆಯ ವಯಸ್ಸಿನಲ್ಲಿ ಕ್ರಿ.ಶ. 1994 ಸೆಪ್ಟೆಂಬರ್ 9 ರಂದು ಲಿಂಗೈಕ್ಯರಾದರು. ಅವರಿಂದು ಭೌತಿಕವಾಗಿ ಇಲ್ಲದಿದ್ದರೂ, ಅವರ ಆತ್ಮಚೈತನ್ಯವೇ ಅವರು ಸಂಕಲ್ಪಿಸಿದ ಎಲ್ಲ ಸೇವೆಗಳನ್ನು ಮುಂದುವರಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ದಿವ್ಯಶಕ್ತಿಯ ಭವ್ಯ ಪರಂಪರೆಯ ನಾಗನೂರು ಶ್ರೀ ರುದ್ರಾಕ್ಷಿಮಠದ 9ನೆಯ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳವರು ಶ್ರೀಮಠದ ಸೇವಾಕ್ಷಿತಿಜವನ್ನು ವಿಸ್ತಾರೋನ್ನತವಾಗಿ ಬೆಳೆಸಿದವರು. ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದ ಪೂಜ್ಯರು, ಭಕ್ತಿ, ಜ್ಞಾನ, ವೈರಾಗ್ಯಗಳ ಸಂಗಮವಾಗಿ ನಿರಾಭಾರಿ ಜಂಗಮರಾಗಿದ್ದಾರೆ. ನಾಡು-ನುಡಿ, ನೆಲ-ಜಲ ಮತ್ತು ಆಚಾರ-ವಿಚಾರಗಳ ಕುರಿತು ಅನನ್ಯ ಅಭಿಮಾನವನ್ನಿಟ್ಟುಕೊಂಡ ಪೂಜ್ಯರು ಮಹೋನ್ನತ ಗ್ರಂಥಗಳನ್ನು ರಚಿಸುವದರೊಂದಿಗೆ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದವರು. ಅನೇಕ ರಚನಾತ್ಮಕ ಕಾರ್ಯಗಳ ಮೂಲಕ ನಾಡಿಗರ ಗೌರವಕ್ಕೆ ಪಾತ್ರರಾದವರು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಸ್ಥಾಪನೆಯಾಗುವಲ್ಲಿ ಪೂಜ್ಯರ ಪಾತ್ರ ಬಹುಮುಖ್ಯವಾದುದು. ಅನೇಕ ಮಠಗಳಿಗೆ ಆದರ್ಶ ಯತಿಗಳನ್ನು ನೇಮಿಸಿ ಆ ಮಠಗಳ ಪರಂಪರೆಯು ಅನೂಚಾನವಾಗಿ ಮುಂದುವರೆಯಲು ಪ್ರೇರಣೆಯಾದವರು. ತಾಂತ್ರಿಕ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ ಬಡಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರು. ಅಪ್ರತಿಮ ಸಮಾಜ ಸಂಘಟಕರಾಗಿ, ಸಂಸ್ಕೃತಿ ಸಂಸ್ಕಾರಗಳ ಸಂರಕ್ಷಕರಾಗಿರುವ ಪೂಜ್ಯರು ಬೇಳಗಾವಿಯ ಬಸವನಕುಡಚಿಯಲ್ಲಿ ವೃದ್ದಾಶ್ರಮವನ್ನು ನಿರ್ಮಿಸುವದರೊಂದಿಗೆ ಹಿರಿಜೀವಗಳಿಗೆ ಆಶ್ರಯದಾತರಾಗಿದ್ದಾರೆ. ಬದುಕು ಬರಹಗಳ ಮೂಲಕ ಸ್ವಾಮಿತ್ವ ಘನತೆ-ಗೌರವಗಳನ್ನು ಹೆಚ್ಚಿಸಿದ ಪೂಜ್ಯರಿಗೆ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ತನ್ನ ಪ್ರಥಮ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

...

1992ರಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ 21ನೆಯ ಅಧಿವೇಶನ, 1995ರಲ್ಲಿ ಜರುಗಿದ ಕರ್ನಾಟಕ ಇತಿಹಾಸ ಅಕಾಡೆಮಿಯ 9ನೆಯ ರಾಜ್ಯಮಟ್ಟದ ಸಮ್ಮೇಳನ. 1999ರಲ್ಲಿ ಜರುಗಿದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, 2001ರ ರಾಜ್ಯಮಟ್ಟದ ಲಿಂಗಾಯತ ಯುವ ಜನ ಸಮಾವೇಶ. 2003ರಲ್ಲಿ ಜರುಗಿದ ಕದಳಿ ಮಹಿಳಾ ಸಮಾವೇಶ, 2003ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಯಶಸ್ವಿಯಾಗಿ ಜರುಗಿಸಿದ ಐತಿಹಾಸಿಕ ಸಂದರ್ಭಗಳು, ಬೀಳಗಿ ಅರಸು ಮನೆತನ, ಬೆಳಗಾವಿ ಜಿಲ್ಲೆಯ ವಿದ್ವತ್‌ಪರಂಪರೆ, ಕರ್ನಾಟಕ ಏಕೀಕರಣದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ, ವಚನ ಅಧ್ಯಯನ ಹಿಂದಣ ಹೆಜ್ಜೆ-ಮುಂದಣ ಮಾರ್ಗ ಮುಂತಾದ ಹತ್ತು ಹಲವು ವಿಚಾರ ಸಂಕಿರಣಗಳು, ಪತ್ರಕರ್ತರ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನ, ಚುಟುಕು ಸಾಹಿತ್ಯ ಸಮ್ಮೇಳನ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ, ಬೆಳಗಾವಿ ಜಿಲ್ಲಾ ವೀರಶೈವ ಮಹಾಸಭೆಯ ರಜತ ಮಹೋತ್ಸವ, ಲಿಂಗಾಯತ ಪುನಶ್ವೇತನ ಶಿಬಿರ. ಡಾ. ಎಂ. ಎಂ. ಕಲಬುರ್ಗಿ, ಡಾ. ಚಂದ್ರಶೇಖರ ಕಂಬಾರ ಬದುಕು ಬರಹ ಕುರಿತಾದ ವಿಚಾರ ಸಂಕಿರಣ, ಶ್ರೀಕೃಷ್ಣ ಪಾರಿಜಾತ ಮತ್ತು ಜಾನಪದ ಕಲೆಗಳ ದಾಖಲೀಕರಣ ಇತ್ಯಾದಿ ನೂರಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ಈವರೆಗೆ ಶ್ರೀಮಠದಿಂದ ನಡೆಸಲಾಗಿದೆ. ಪ್ರತಿ ತಿಂಗಳು ಶಿವಾನುಭವ ಕಾರ್ಯಕ್ರಮ, ಮೌಲಿಕ ಗ್ರಂಥಗಳ ಪ್ರಕಟಣೆ, ಲಿಂಗಾಯತ ಮಾಸಪತ್ರಿಕೆಯ ಪ್ರಕಟಣೆಗಳು ನಿರಂತರ ನಡೆದಿವೆ. ಲಿಂಗಾಯತ ಸಂಶೋಧನ ಕೇಂದ್ರವನ್ನು ಸ್ಥಾಪಿಸಿ. ಲಿಂಗಾಯತ ಧರ್ಮ, ಸಾಹಿತ್ಯ, ತತ್ವಜ್ಞಾನ, ಇತಿಹಾಸ, ಕಲೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಾವಿರಾರು ಗ್ರಂಥಗಳನ್ನು ಸಂಗ್ರಹಿಸಲಾಗಿದೆ. ಸಾಹಿತಿ-ಸಂಶೋಧಕರಿಗೆ ಸಂಶೋಧನೆ ಮಾಡಲು ಅನುಕೂಲಗಳನ್ನು ಕಲ್ಪಿಸಿ ಕೊಡಲಾಗಿದೆ. ಲಿಂಗಾಯತ ಧರ್ಮ ಸಾಹಿತ್ಯಕ್ಕೆ ಸಂಬಂಧಿಸಿದ ನೂರಾರು ಗ್ರಂಥಗಳನ್ನು ಪ್ರಕಟಿಸಿ ಸಾಹಿತ್ಯಲೋಕಕ್ಕೆ ಪರಿಚಯಿಸಲಾಗಿದೆ. ಇತ್ತೀಚೆಗೆ ವಚನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ತನ್ಮೂಲಕ ವಚನಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಈ ಎಲ್ಲ ಕಾರ್ಯಗಳ ಕ್ರೀಯಾಶಕ್ತಿ ಮತ್ತು ಯಶಸ್ವಿಯಾಗಿ ಸಂಘಟಿಸಿದವರು ಪೂಜ್ಯಶ್ರೀ ಡಾ. ಸಿದ್ದರಾಮ ಮಹಾಸ್ವಾಮಿಗಳವರು. ಪೂಜ್ಯರು ನಾಗನೂರು ಮಠವನ್ನು ನಾಡಿನ ಪ್ರತಿಷ್ಠಿತ ಮಠವನ್ನಾಗಿ ಮಾಡಿದರು.

Technology Image

...

ಶೈಕ್ಷಣಿಕವಾಗಿ ಶ್ರೀಮಠವನ್ನು ಉತ್ತುಂಗಕ್ಕೇರಿಸಿದ ಕೀರ್ತಿಯು ಪೂಜ್ಯರಿಗೆ ಸಲ್ಲುತ್ತದೆ. ಪ್ರಸಾದ ನಿಲಯದಲ್ಲಿ ನೂರಾರು ಬಡ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಅನ್ನ ಆಶ್ರಯಗಳನ್ನು ಕಲ್ಪಿಸಿರುವುದಲ್ಲದೆ ನರ್ಸರಿಯಿಂದ ಕಾಲೇಜು ಹಂತದವರೆಗೆ ವಿವಿಧ ವಿದ್ಯಾಲಯಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಸೇವಾ ಕಾರ್ಯಗಳಲ್ಲಿ ಶ್ರೀಮಠವನ್ನು ಮುನ್ನಡೆಸಿದ್ದಾರೆ. ಧಾರವಾಡ, ಬೆಂಗಳೂರು, ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲೂ ಶ್ರೀಮಠದ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿದ್ದಾರೆ. ಇತ್ತೀಚೆಗೆ ಪ್ರಾರಂಭಿಸಿದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಅಲ್ಪಾವಧಿಯಲ್ಲಿಯೇ ರಾಜ್ಯದ ಅತ್ಯುತ್ತಮ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. ಹೆಸರಾಂತ ಮಠಗಳಲ್ಲಿ ಒಂದಾದ ಶ್ರೀಮಠದ ಸೇವಾಕಾರ್ಯಗಳು ತುಂಬ ವಿಶಿಷ್ಟ, ಗಡಿಭಾಗದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಘನತೆ-ಗೌರವಗಳನ್ನು ಹೆಚ್ಚಿಸಿದ ಪೂಜ್ಯರಿಗೆ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ತನ್ನ ಪ್ರಥಮ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಹೆಸರಾಂತ ಮಠಗಳಲ್ಲಿ ಒಂದಾದ ಶ್ರೀಮಠದ ಸೇವಾಕಾರ್ಯಗಳು ತುಂಬ ವಿಶಿಷ್ಟ, ಗಡಿಭಾಗದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಿರುವುದು ಈ ಮಠದ ಹೆಮ್ಮೆಯ ಕಾರ್ಯ. ಜೊತೆಗೆ ಈ ಭಾಗದ ಎಲ್ಲ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶ್ರೀಮಠ ಸಕ್ರಿಯವಾಗಿ ಪಾಲ್ಗೊಳ್ಳುವುದಲ್ಲದೆ ಸ್ವತಃ ಶ್ರೀಮಠದಿಂದಲೂ ನಿರಂತರ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಸರ್ವಾಂಗೀಣ ಪ್ರಗತಿಗಾಗಿ ಪರಿಶ್ರಮಿಸಲಾಗುತ್ತಿದೆ. ಜೊತೆಗೆ ಶ್ರೀಮಠ ನಡೆಸುವ ಕನ್ನಡದ ಕಾರ್ಯಚಟುವಟಿಕೆಗಳ ಕಾರಣದಿಂದ ಅದೊಂದು ಕನ್ನಡದ ಶಕ್ತಿಕೇಂದ್ರವಾಗಿ ಪರಿಣಮಿಸಿದೆ. ಹೀಗೆ ಹತ್ತು ಹಲವು ಸೇವಾ ಕಾರ್ಯಗಳನ್ನು ಶ್ರೀಮಠವು ಅರ್ಪಣಾ ಭಾವದಿಂದ ತೆರೆಯ ಮರೆಯ ಕಾಯಿಯಾಗಿ ನಿರ್ವಹಿಸುತ್ತ ನಾಡಿನ ಹೆಮ್ಮೆಯ ಮಠಗಳಲ್ಲಿ ಒಂದಾಗಿ ಬೆಳಗುತ್ತಲಿದೆ. ಪೂಜ್ಯಶ್ರೀ ಡಾ. ಶಿವಬಸವ ಸ್ವಾಮಿಗಳು, ಪೂಜ್ಯಶ್ರೀ ಪ್ರಭು ಸ್ವಾಮಿಗಳು, ಹಾಗು ಪೂಜ್ಯಶ್ರೀ ಡಾ. ಸಿದ್ದರಾಮ ಸ್ವಾಮಿಗಳು, ಬಿಲ್ವದಳದಂತೆ ಶ್ರೀಮಠದ ಉನ್ನತಿಗೆ ಕಾರಣರಾಗಿದ್ದಾರೆ. ಪ್ರಸ್ತುತ 10ನೆಯ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಸ್ವಾಮಿಗಳವರು ನಯ, ವಿನಯ ಶಿಸ್ತು ಸೌಜನ್ಯದ ಸಾಕಾರ ಮೂರ್ತಿಗಳಾಗಿದ್ದಾರೆ. ಹಿರಿಯ ಪೂಜ್ಯರ ಸದಾಶಯದಂತೆ ಶ್ರೀಮಠವನ್ನು ಮುನ್ನಡೆಸುತ್ತಿರುವ ಪೂಜ್ಯರು ಆಧುನಿಕ ದಿನಮಾನದ ಯುವಯತಿಗಳಾಗಿದ್ದಾರೆ.

Technology Image